ಬಾಂಡುಂಗ್
	ಇಂಡೊನೇಷ್ಯದ ಪಶ್ಚಿಮ ಜಾವಾ ಪ್ರಾಂತ್ಯದ ರಾಜಧಾನಿ.  ಜಾವಾ ದ್ವೀಪದ ಒಳಭಾಗದಲ್ಲಿ.  ಸಮುದ್ರ ಮಟ್ಟಕ್ಕೆ ಸುಮಾರು 730 ಮೀ. ಎತ್ತರವಾದ ಪ್ರಸ್ಥಭೂಮಿಯ ಉತ್ತರಭಾಗದ ಅಂಚಿನಲ್ಲಿ ಜಕಾರ್ತದ ಆಗ್ನೇಯಕ್ಕೆ ಸುಮಾರು 120 ಕಿ.ಮೀ ದೂರದಲ್ಲಿ, ದ.ಅ. 6054' ಮತ್ತು ಪೂ.ರೇ. 107036' ಮೇಲೆ ಇದೆ.  ಜನಸಂಖ್ಯೆ 11,14,000 (1971ರ ಅಂದಾಜು).  ಇಂಡೋನೇಷ್ಯದಲ್ಲಿ ಇದು ಮೂರನೆಯ ದೊಡ್ಡ ನಗರ. ಇದನ್ನು ಪರ್ವತಗಳೂ ಜಲಪಾತಗಳೂ ಸುಂದರವಾದ ಬತ್ತದ ಗದ್ದೆಗಳೂ ಸುತ್ತುವರಿದಿವೆ.  ಹಿತಕರವಾದ ವಾಯುಗುಣದಿಂದ ಕೂಡಿರುವುದರಿಂದ ತೀರ ಪ್ರದೇಶದ ಜನಕ್ಕೆ ಇದೊಂದು ಆರೋಗ್ಯಧಾಮ.  ಇಲ್ಲಿಂದ ಜಾವಾದ ಇತರ ಮುಖ್ಯ ಸ್ಥಳಗಳಿಗೆ ರೈಲ್ವೆ ಸಂಪರ್ಕವುಂಟು.  ಈ ನಗರದ ಪಶ್ಚಿಮಕ್ಕೆ 8 ಕಿಮೀ ದೂರದಲ್ಲಿ ವಿಮಾನ ನಿಲ್ದಾಣವಿದೆ.  ಉತ್ತಮ ಸಂಪರ್ಕ ಸೌಲಭ್ಯ ಪಡೆದಿರುವುದರಿಂದ ಇದೊಂದು ಪ್ರಮುಖ ವ್ಯಾಪಾರಕೇಂದ್ರ.  ಇಲ್ಲಿ ಅನೇಕ ನೇಯ್ಗೆ ಕಾರ್ಖಾನೆಗಳಿವೆ.  ಅವುಗಳ ಪೈಕಿ ಹಲವು ಕಾರ್ಖಾನೆಗಳು ಚೀನಿಯರ ಮಾಲೀಕತೆಯಲ್ಲಿವೆ.  ಕ್ವಿನೈನ್ ತಯಾರಿಸುವ  ದೊಡ್ಡ ಕಾರ್ಖಾನೆಯೂ ಇದೆ.  ಒಂದನೆಯ ಮಹಾಯುದ್ಧಕ್ಕೆ ಮೊದಲು ವಿಶ್ವದ ಶೇಕಡಾ 30ರಷ್ಟು ಕ್ವಿನೈನ್ ಇಲ್ಲೇ ತಯಾರಾಗುತ್ತಿತ್ತು.  ಇಲ್ಲಿ ತಯಾರಾಗುವ ಇತರ ಪದಾರ್ಥಗಳು ರಬ್ಬರ್ ಹಾಗೂ ಯಂತ್ರೋಪಕರಣ.

	ಹಿಂದೆ ಇದು ಸುಂಡಾದ ಜನರ ಸಾಂಸ್ಕøತಿಕ ಹಾಗೂ ವಿದ್ಯಾಕೇಂದ್ರವಾಗಿತ್ತು.  ಇಲ್ಲಿ ಸಾಲು ಮರಗಳಿಂದ ಕೂಡಿದ ವಿಶಾಲ ರಸ್ತೆಗಳೂ ಪಾಶ್ಚಾತ್ಯ ಶೈಲಿಯಲ್ಲಿ ಕಟ್ಟಲಾದ ಕಟ್ಟಡಗಳೂ ಇವೆ.  ಇಲ್ಲಿ ಮೂರು ದೊಡ್ಡ ಉದ್ಯಾನಗಳಿವೆ. ಅವುಗಳ ಪೈಕಿ ಟಾಮನ್ ಸಾರಿ ಅಥವಾ ಜೂಬಿಲಿ ಪಾರ್ಕ್ ಅತ್ಯಂತ ಸುಂದರವಾದದ್ದು.  ಬಿದಿರಿನ ವಾದ್ಯಗಳ ಮೇಳಗೀತ ಹಾಗೂ ಸೂತ್ರದ ಗೊಂಬೆಯಾಟ ಇಲ್ಲಿ ಜನಪ್ರಿಯವಾಗಿವೆ.  ಇಲ್ಲಿಯ ಭೂವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಖನಿಜಗಳ ಮತ್ತು ಪಳೆಯುಳಿಕೆಗಳ ಒಳ್ಳೆಯ ಸಂಗ್ರಹವಿದೆ.  ಸರ್ಕಾರಿ ತಾಂತ್ರಿಕ ಸಂಶೋಧನಾಲಯ, ನೂಲು, ಬಣ್ಣ ಮತ್ತು ರಾಸಾಯನಿಕಗಳ ಉಪಯೋಗದ ಬಗ್ಗೆ ತಾಂತ್ರಿಕ ಸಲಹೆ ನೀಡುತ್ತದೆ ಮತ್ತು ಸಂಶೋಧನೆ ನಡೆಸುತ್ತದೆ.  ಸರ್ಕಾರದ ಕೈಗಾರಿಕಾ ಇಲಾಖೆಗೆ ಒಳಪಟ್ಟ ಕುಂಭಕಲಾ ಸಂಶೋಧನಾಲಯವಿದೆ.  ಇದು ಕುಂಭಕಲೆಗೆ ಬೇಕಾದ ಕಚ್ಚಾ ಸಾಮಗ್ರಿ ಹಾಗೂ ಕುಂಭ ಕೈಗಾರಿಕೆಯ ಬಗ್ಗೆ ಸಲಹೆ ನೀಡುತ್ತದೆ.  ಇಲ್ಲಿಯ ಪೇಟೆ ಬೀದಿಗಳಲ್ಲಿ ಪ್ರಮುಖವಾದದ್ದು ಪಾಸೆರ್ ಬಾರು.  ಬಾಂಡುಂಗಾನಲ್ಲಿ ಅನೇಕ ಚರ್ಚುಗಳೂ ದೊಡ್ಡ ಮಸೀದಿಯೂ ಇದೆ.  ಇಲ್ಲಿ ಇಂಡೊನೇಷ್ಯ ನೆಗೆರಿ ಪದ್ಜರ್ಜರನ್ (1957) ಮತ್ತು ಕಾಟೊಲಿಕ್ ಪರಹ್ಯಂಗನ್ (1955).  ವಿಶ್ವವಿದ್ಯಾಲಯಗಳ ಕೆಲವು ವಿಭಾಗಗಳಿವೆ.  ಉತ್ತರದಲ್ಲಿ ಲೆಂಬಾಂಗ್ ಪ್ರಸ್ಥಭೂಮಿಯಲ್ಲಿ ಬೋಷ್ಟ ಖಗೋಳವೀಕ್ಷಣಾಲಯವಿದೆ.  1964ರಲ್ಲಿ ಪ್ರಾರಂಭಿಸಲಾದ ಪರಮಾಣು ಸಂಶೋಧನ ಕೇಂದ್ರದಲ್ಲಿ ಪರಮಾಣು ರಿಯಾಕ್ಟರ್ ಇದೆ.

	ಬಾಂಡುಂಗ್ ನಗರವನ್ನು 1810ರಲ್ಲಿ ಡಚ್ ಗವರ್ನರ್-ಜನರಲ್ ಮಾರ್ಷಲ್ ಹರ್ಮನ್ ವಿಲೆಮ್ ಡ್ಯಾಂಡೆಲ್ಸ್ ಸ್ಥಾಪಿಸಿದ.  1884ರಲ್ಲಿ ಬೋಗಾರ್‍ನಿಂದ ಇಲ್ಲಿಗೆ ರೈಲುಮಾರ್ಗ ಆರಂಭವಾಗುವವರೆಗೂ ಇದು ಹಳ್ಳಿಯಾಗಿಯೇ ಇತ್ತು.  ಎರಡನೆಯ ಮಹಾಯುದ್ಧಕಾಲದಲ್ಲಿ ಈ ನಗರ ಡಚ್ ಸರ್ಕಾರ ಹಾಗೂ ಮಿತ್ರರಾಷ್ಟ್ರಗಳ ರಕ್ಷಣೆಯ ಪ್ರಮುಖ ಆಯಕಟ್ಟಿನ ಸ್ಥಳವಾಗಿತ್ತು.  ಆದರೆ 1942ರ ಮಾರ್ಚ್ 7ರಂದು ಇದು ಜಪಾನಿಯರ ವಶವಾಗಿದ್ದು ಯುದ್ಧಾಂತ್ಯದಲ್ಲಿ ವಿಮೋಚನೆಗೊಂಡಿತು.  (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ